ಗೋದಾವರಿ-
ಭಾರತದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಬಂಗಾಳ ಕೊಲ್ಲಿಯನ್ನು ಸೇರುವ, ದಖನ್ನಿನ ಉತ್ತರ ಬಾಗದಲ್ಲಿ ಹರಿಯುವ ಒಂದು ದೊಡ್ಡ ನದಿ. ಭಾರತದಲ್ಲಿ ಗಂಗಾನದಿಯನ್ನು ಪಾವಿತ್ರ್ಯದಲ್ಲಾಗಲಿ, ಸೌಂದರ್ಯದಲ್ಲಾಗಲಿ, ಉಪಯುಕ್ತತೆಯಲ್ಲಾಗಲಿ, ಉದ್ದದಲ್ಲಾಗಲಿ ಇದನ್ನು ಮೀರಿಸುವ ನದಿ ಇನ್ನೊಂದಿಲ್ಲ. ಗೋದಾವರಿ ನದಿಯ ಉದ್ದ 1, 465 ಕಿ.ಮೀ. ಇದರ ಜಲೋತ್ಸಾರಣ ನೆಲದ ವಿಸ್ತೀರ್ಣ ಸುಮಾರು 3,13,383 ಚ. ಕಿ. ಮೀ. ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ, ತ್ರ್ಯಂಬಕೇಶ್ವರದ ಬ್ರಹ್ಮಗಿರಿಯಲ್ಲಿ, 3, 500' ಎತ್ತರದಲ್ಲಿ, ನದಿ ಉಗಮಿಸುತ್ತದೆ. ಪಶ್ಚಿಮದ ಅರಬ್ಬೀ ಸಮುದ್ರಕ್ಕೆ ಇಲ್ಲಿಂದ ಕೇವಲ 80 ಕಿ.ಮೀ. ನದಿ ಉಗಮಿಸುವೆಡೆಯಲ್ಲಿ ಸರೋವರವೊಂದುಂಟು. ಗಿರಿಯ ತಳದಿಂದ 690 ಮೆಟ್ಟಿಲುಗಳನ್ನು ಹತ್ತಿ ಹೋದರೆ ಸಿಗುವ ಈ ಸರೋವರದೊಳಕ್ಕೆ ಬಂಡೆಗಳ ಕಿಂಡಿಯೊಳಗಿನಿಂದ ನೀರು ಒಸರುತ್ತದೆ.

ಉಗಮದಿಂದ ಸಂಗಮದವರೆಗೂ ನದಿ ಸಾಧಾರಣವಾಗಿ ಆಗ್ನೇಯಾಭಿಮುಖವಾಗಿಯೇ ಹರಿಯುತ್ತದೆ. ನಾಸಿಕವನ್ನು ದಾಟಿ, ಅಹಮದ್‍ನಗರ ಮತ್ತು ಔರಂಗಾಬಾದ್ ಜಿಲ್ಲೆಗಳ ನಡುವಣ ಗಡಿಯಾಗಿ ಜಿಗಿಯುವ ಪರಿಣಮಿಸುತ್ತದೆ. ನಾಸಿಕ್‍ವರೆಗೂ ಬಂಡೆಗಳ ನಡುವೆ ಕಿರಿದಾದ ಪಾತ್ರದಲ್ಲಿ ಜಿಗಿಯುವ ಗೋದಾವರಿ ನದಿ ಅಲ್ಲಿಂದ ಮುಂದಕ್ಕೆ ಮಣ್ಣಿನ ವಿಶಾಲವಾದ ಪಾತ್ರದಲ್ಲಿ ಕಡಿಮೆ ವೇಗದಲ್ಲಿ ಮುಂದುವರಿಯುತ್ತದೆ. ನದಿ ಸ್ವಲ್ಪ ದೂರ ಸಾಗಿದ ಮೇಲೆ ಬಲಗಡೆಯಿಂದ ಬಂದು ಇದನ್ನು ಸೇರುವ ಉಪನದಿ ಧಾರಣಾ. ಮುಂದೆ, 27 ಕಿ.ಮೀಗಳ ದೂರದಲ್ಲಿ ಎಡದಂಡೆಯಲ್ಲಿ ಸಂಗಮಿಸುವ ನದಿ ಕಾದಬಾ. ಅನಂತಂರ ಗೋದಾವರಿಯನ್ನು ಪ್ರವರ ಮತ್ತು ಮುಳಾ ನದಿಗಳು ಒಂದಾಗಿ ಸೇರುತ್ತವೆ.

	ಪುರಾತನ ನಗರವಾದ ಪೈಠಣದ ಬಲಗಡೆಯಲ್ಲಿ ಹರಿದು ಸಾಗುವ ಗೋದಾವರಿ ನದಿ ಮಹಾರಾಷ್ಟ್ರದ ನಟ್ಟನಡುವಿನಲ್ಲಿ ಮುಂದುವರಿಯುತ್ತದೆ. ಪರ್‍ಬಾನಿ ಜಿಲ್ಲೆಯ ಬಳಿ ಪೂರ್ಣಾ ನದಿಯೂ ನಂದೇಡ್ ಜಿಲ್ಲೆಯಲ್ಲಿ ಕೊಂಡಲ್‍ವಾಡಿಯ ಬಳಿ ಮಂಜ್ರಾ ನದಿಯೂ ಸೇರುತ್ತದೆ. ಮುಂದೆ ಆಂಧ್ರ ಪ್ರದೇಶವನ್ನು ಹೊಕ್ಕು ಬಹುತೇಕ ಪೂರ್ವಾಭಿಮುಖವಾಗಿ ಹರಿಯುವ ಗೋದಾವರಿಯಲ್ಲಿ ನದಿಯನ್ನು ಅದಿಲಾಬಾದ್ ಜಿಲ್ಲೆಯ ಚಿನ್ನೂರ್ ತಾಲ್ಲೂಕಿನಲ್ಲಿ ಕೂಡಿಕೊಳ್ಳುವ ಉಪನದಿ ಮಾಣೇರ್. ಸಿರೋಂಚದ ಬಳಿಯಲ್ಲಿ ಎಡಗಡೆಯಿಂದ ಪ್ರಾಣಹಿತಾ ನದಿ ಹರಿದು ಬಂದು ಗೋದಾವರಿಯನ್ನು ಸೇರುತ್ತದೆ. ಅದು ಪೇನಗಂಗಾ, ವರ್ಧಾ ಮತ್ತು ವೈನಗಂಗಾ ನದಿಗಳನ್ನೂ ಕೂಡಿಸಿಕೊಂಡು ಮಹಾರಾಷ್ಟ್ರದಿಂದ ಹರಿದು ಬರುವ ನದಿ. ಈ ಬಳಿಯಲ್ಲಿ ನದಿ ಮತ್ತೆ ಮಹಾರಾಷ್ಟ್ರದ ಗಡಿಯನ್ನು ಮುಟ್ಟಿ ಇಲ್ಲಿಂದ ಮತ್ತೆ ಆಗ್ನೇಯ ದಿಕ್ಕಿಗೆ ಹರಿಯುತ್ತದೆ. ಮಹಾರಾಷ್ಟ್ರದ ಚಾಂದ ಮತ್ತು ಮಧ್ಯಪ್ರದೇಶದ ಬಸ್ತಾರ್ ಜಿಲ್ಲೆಗಳ ಗಡಿಗಳನ್ನು ಸೋಕಿ ಸ್ವಲ್ಪ ದೂರ ಮುಂದುವರಿಯುವ ಗೋದಾವರಿಯ ಬಸ್ತಾರ್ ಜಿಲ್ಲೆಯಿಂದ ಇಂದ್ರಾವತಿಯೂ ಸ್ವಲ್ಪ ದೂರ ಕೆಳಗೆ ತಾಳ್ ನದಿಯೂ ಸೇರುತ್ತವೆ. ವಿದರ್ಭದ ನೆರೆಯಲ್ಲಿ ಹರಿಯುವ ಗೋದಾವರಿಯ ಪಾತ್ರ 2-3 ಕಿ. ಮೀ. ವಿಶಾಲವಾಗಿ, ಮರಳಿನಿಂದ ಕೂಡಿದೆ. ಒಂದೆರಡು ಎಡೆಗಳಲ್ಲಿ ಮಾತ್ರ ಬಂಡೆಗಳು ಅಡ್ಡ ಬಂದಿವೆ. ಇವನ್ನು ನಿವಾರಿಸಿ, ಹತ್ತಿ ಬೆಳೆಯುವ ವರ್ಧಾ ಮತ್ತು ನಾಗಪುರ ಜಿಲ್ಲೆಗಳಿಂದ ಸಮುದ್ರಕ್ಕೆ ಜಲಧಾರಿ ಏರ್ಪಡಿಸಬೇಕೆಂದು 1854ರಲ್ಲಿ ಆಲೋಚಿಸಲಾಗಿತ್ತು. ಈ ಕಾರ್ಯಕ್ಕಾಗಿ ಕಂಡುಬಂದದ್ದರಿಂದ 1871 ರಿಂದ ಈ ಯೋಜನೆಯನ್ನು ತ್ಯಜಿಸಲಾಯಿತು.

	ಸಿರೋಂಚದಿಂದ ಮುಂದುವರಿದು ಹರಿಯುವ ಗೋದಾವರಿಯನ್ನು ಸಂಗಮಿಸುವ ನದಿ ಶಬರಿ. ಅನಂತರ ಇದು ಗೋದಾವರಿ ಜಿಲ್ಲೆಗಳ ನಡುವೆ ಹರಿದು ಸಮುದ್ರದತ್ತ ಸಾಗುತ್ತದೆ. ಅದುವರೆಗೂ ಸಮತಲದ ಮೇಲೆ ವಿಶಾಲವಾದ ಪಾತ್ರದಲ್ಲಿ ನಿಧಾನವಾಗಿ ಹರಿಯುವ ನದಿ ಸ್ವಲ್ಪ ಮುಂದೆ ಪೂರ್ವಘಟ್ಟಗಳನ್ನು ಭೇದಿಸಿಕೊಂಡು ಮುಂದುವರಿಯುವುದರಿಂದ ನದಿಯ ಪಾತ್ರ ಕಿರಿದೂ ಪ್ರವಾಹ ಹೆಚ್ಚು ವೇಗವೂ ಆಗುತ್ತದೆ. ಕಡಿದಾದ ಎತ್ತರ ದಂಡೆಗಳು ಮತ್ತು ಅವುಗಳ ಮೇಲಿನ ದಟ್ಟಕಾಡುಗಳಿಂದ ಅಲ್ಲಿಯ ನದಿ ಪ್ರದೇಶಕ್ಕೆ ರುದ್ರ ರಮಣೀಯತೆ ಉಂಟಾಗಿದೆ. ಘಟ್ಟಗಳನ್ನು ದಾಟಿದ ಮೇಲೆ ನದಿಯ ಹರಿವು ಮತ್ತೆ ನಿಧಾನವೂ ಪಾತ್ರ ವಿಶಾಲವೂ ಆಗಿ ಪರಿಣಮಿಸುತ್ತದೆ. ನದಿಯಲ್ಲಿ ಉಂಟಾದ ಹಲವು ನಡುಗಡ್ಡೆಗಳು ಹೊಗೆಸೊಪ್ಪಿನ ಬೆಳೆಗೆ ಪ್ರಸಿದ್ಧವಾಗಿವೆ. ಪ್ರವಾಹ ಕಾಲದಲ್ಲಿ ನದಿ ದಡ ಮೀರಿ ಹರಿದು ಅನಾಹುತ ಮಾಡುವುದುಂಟು. ನದಿಯ ದಡಗಳಲ್ಲಿ ಎತ್ತರದ ಕಟ್ಟೆ ಕಟ್ಟಿ ಇದನ್ನು ತಡೆಗಟ್ಟಬೇಕಾಗುತ್ತದೆ.

	ರಾಜಮಹೇಂದ್ರಿಯಿಂದ ಮುಂದೆ ನದಿ ಎರಡು ಕವಲುಗಳಾಗಿ ಒಡೆಯುತ್ತದೆ. ಈ ಎಡೆಯಲ್ಲಿ ನದಿಯ ಅಗಲ ಸು. 7 ಕಿ.ಮೀ. ಪೂರ್ವದ ಕವಲು ಗೌತಮಿ ಗೋದಾವರಿ. ಪಶ್ಚಿಮದ್ದು ವಶಿಷ್ಠ ಗೋದಾವರಿ. ಈ ಕವಲುಗಳು ನದಿಯಿಂದಾದ ಮುಖಜಭೂಮಿಯನ್ನು ಹಾಯ್ದು ಸಮುದ್ರ ಸೇರುತ್ತವೆ. ಒಂದು ಕವಲು ಸ್ವಲ್ಪ ದೂರ ಮುನ್ನಡೆದ ಮೇಲೆ ಹೊರಡುವ ಒಂದು ಉಪಶಾಖೆಗೆ ವೈನತೇಯ ಎಂದು ಹೆಸರು. ಗೋದಾವರಿಯ ಕವಲುಗಳಿರುವ ಈ ಪ್ರದೇಶ ಅತ್ಯಂತ ಫಲವತ್ತಾದ್ದು. ನದಿ ಕವಲೊಡೆಯುವುದಕ್ಕೆ ಮುನ್ನ ಮುಖ್ಯ ಧವಳೇಶ್ವರದ ಬಳಿ ಹರಿಯುವ ಪ್ರವಾಹ ಸುಮಾರು 10 ಲಕ್ಷ ಕ್ಯೂಸೆಕ್ಸುಗಳಿಂದ 20 ಲಕ್ಷ ಕ್ಯೂಸೆಕ್ಸುಗಳವರೆಗೆ ವ್ಯತ್ಯಾಸವಾಗುತ್ತದೆ. ಇಲ್ಲಿ ಹರಿದಿರುವ ಗರಿಷ್ಠ ಪ್ರವಾಹ 30,12,000 ಕ್ಯೂಸೆಕ್ಸುಗಳು. ಮಳೆಗಾಲವಲ್ಲದಾಗ ನದಿಯ ನೀರಿನ ಪರಿಮಾಣ ತುಂಬ ಕಡಿಮೆಯಾಗುತ್ತದೆ. ಮೇ ತಿಂಗಳಲ್ಲಿ ಅದು 15,000 ಕ್ಯೂಸೆಕ್ಸುಗಳಷ್ಟು ಕಡಿಮೆಯಿರಬಹುದು. ನದಿಯ ಗರಿಷ್ಠ ವಾರ್ಷಿಕ ಪ್ರವಾಹ ಸುಮಾರು 7,70,000,00,00,000 ಘನ ಅಡಿ. ಕನಿಷ್ಠ 43,800,00,00,000 ಘನ ಅಡಿ. ಗೋದಾವರಿಯಲ್ಲಿ ಹರಿಯುವ ವಾರ್ಷಿಕ ಸರಾಸರಿ ನೀರು ಅಮೆರಿಕದ ಕೊಲಂಬಿಯ ನದಿಯದಕ್ಕಿಂತ ಹೆಚ್ಚು, ಈಜಿಪ್ಟಿನ ನೈಲ್ ನದಿಯಕ್ಕಿಂತ ಅಧಿಕ. ಗೋದಾವರಿ ಜಿಲ್ಲೆಗಳಲ್ಲಿ ನದಿಯ ಮೇಲ ದೋಣಿಗಳು ಸಂಚರಿಸುತ್ತವೆ. ಕಾಲುವೆಗಳೂ ದೋಣಿಸಂಚಾರಕ್ಕೆ ಯೋಗ್ಯವಾಗಿದೆ. ಇವಕ್ಕೂ ಕೃಷ್ಣಾ ನದೀ ಮುಖಜ ಭೂಮಿಯ ಕಾಲುವೆಗಳಿಗೂ ಸಂಪರ್ಕ ಏರ್ಪಟ್ಟಿದೆ. 

	ಮಹಾರಾಷ್ಟ್ರದಲ್ಲಿ ಗೋದಾವರಿ ಮತ್ತು ಅದರ ಉಪನದಿಗಳನ್ನು ನೀರಾವರಿಗೆ ಹೆಚ್ಚು ಬಳಸಿಕೊಳ್ಳಲಾಗಿಲ್ಲ. ನಾಸಿಕದ ಬಳಿಯ ಗಂಗಾಪುರ ಕಟ್ಟೆ. ಇಗಟಿಪುರಿಯ ಬಳಿ ಧಾರಣಾ ನದೀ ಕಟ್ಟೆ, ಪ್ರವರದ ಭಂಡಾರಧಾರ ಕಟ್ಟೆ ಇವು ಮುಖ್ಯವಾದವು. ಮಾಹಾರಾಷ್ಟ್ರದಲ್ಲೂ ಆಂಧ್ರಪ್ರದೇಶದಲ್ಲೂ ಗೋದಾವರೀ ನದೀಪ್ರದೇಶಕ್ಕೆ ದೀರ್ಘವಾದ ಇತಿಹಾಸವುಂಟು. ಫಲವತ್ತಾದ ಕಪ್ಪು ಮಣ್ಣಿನ ಕಣಿವೆಯಿಂದ ಕೂಡಿದ ಗೋದಾವರಿ ಆ ಪ್ರದೇಶದ ಜೀವನಾಡಿಯೆನಿಸಿತ್ತು; ಅಲ್ಲಿಯ ನಾಗರಿಕತೆಯ ತೊಟ್ಟಿಲಾಗಿತ್ತು. ನಾಸಿಕ್ ಮತ್ತು ಪೈಠಣ ಪ್ರಾಚೀನ ರಾಜವಂಶಗಳ ರಾಜಧಾನಿಗಳಾಗಿದ್ದುವು. ಕರ್ನಾಟಕವನ್ನಾಳಿದ ಸಾತವಾಹನ ದೊರೆಗಳು ಪ್ರತಿಷ್ಠಾನದಿಂದ (ಈಗಿನ ಪೈಠಣ) ಆಳುತ್ತಿದ್ದರೆಂದು ತಿಳಿದುಬರುತ್ತದೆ. (ಕ್ರಿ.ಶ. 2ನೆಯ ಶತಮಾನ). ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿತ್ತೆಂದು ಕವಿರಾಜಮಾರ್ಗಕಾರ (ಕ್ರಿ. ಶ. 9ನೆಯ ಶತಮಾನ) ಹೇಳುತ್ತಾನೆ. 

	ಗೋದಾವರಿ ಅತ್ಯಂತ ಪವಿತ್ರವಾದ ನದಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಗಂಗೆ ಉಗಮಿಸುವಲ್ಲೇ ಗೋದಾವರಿಯೂ ಉಗಮಿಸಿ ಅಂತರ್ಗತವಾಗಿ. ಬಂದು ಇಲ್ಲಿ ಹರಿಯುವುದೆಂದೂ ಹೇಳಲಾಗಿದೆ. ಇದಕ್ಕೆ ವೃದ್ಧಗಂಗಾ ಎಂದೂ ಹೆಸರಿದೆ. ಸಂಸ್ಕøತದಲ್ಲಿ ಗೋದಾವರೀ ಶಬ್ದಕ್ಕೆ ನೀರು ಅಥವಾ ಹಸುವನ್ನು ಕೊಡುವುದು ಎಂದು ಅರ್ಥ. ಗೌತಮ ಮಹರ್ಷಿಗೆ ರಾಮ ಇದರ ಮಹಾತ್ಮ್ಯೆಯನ್ನು ತಿಳಿಸಿದುದಾಗಿ ಪ್ರತೀತಿ. ಗೋಹತ್ಯ ದೋಷ ನಿವಾರಣೆಗಾಗಿ ಗೌತಮ ತಪಸ್ಸನ್ನಾಚರಿಸಿ, ಶಂಕರನ ಜಟೆಯಲ್ಲಿದ್ದ ಗಂಗೆಯನ್ನು ಭೂಲೋಕಕ್ಕೆ ಕಳುಹಿಸಬೇಕೆಂದು ವರ ಬೇಡಿದ. ಅದಕ್ಕೆ ಶಂಕರ ಒಪ್ಪಿ ಗಂಗೆಯನ್ನು ಬ್ರಹ್ಮಗಿರಿಯ ಮೇಲೆ ಬಿಟ್ಟ. ಗಂಗೆ ಹರಿದು ಗೋವನ್ನು ಬದುಕಿಸಿದಳು. ಆದ್ದರಿಂದ ನದಿಗೆ ಗೋದಾವರೀ, ಗೌತಮೀ, ಗಂಗಾ ಎಂಬ ಹೆಸರುಗಳು ರೂಢಿಗೆ ಬಂದುವು. ಈಗಲೂ ಔದುಂಬರ ವೃಕ್ಷದ ಕೆಳಗೆ ಕುಂಡದಲ್ಲಿ ಮೂಲಗಂಗೆಯನ್ನು ನೋಡಬಹುದೆನ್ನಲಾಗಿದೆ. ಇದೇ ಮುಂದೆ ಗಿರಿಗರ್ಭವನ್ನು ಹೊಕ್ಕು ಬ್ರಹ್ಮಗಿರಿಯ ಪೂರ್ವಭಾಗದಲ್ಲಿ ಪ್ರಕಟವಾಯಿತೆಂಬುದು ನಂಬಿಕೆ. ಆ ಸ್ಥಳದಲ್ಲಿ ಗೋಮುಖವನ್ನೂ ಮೇಲ್ಭಾಗದಲ್ಲಿ ಗಂಗೆಯ ಚಿಕ್ಕ ದೇವಸ್ಥಾನವನ್ನೂ ಕಟ್ಟಲಾಗಿದೆ. 

	ಶ್ರೀರಾಮ ವನವಾಸದಲ್ಲಿದ್ದಾಗ್ಗೆ ಗೋದಾವರಿಯ ಪಂಚವಟೀ ತೀರದಲ್ಲಿ ವಾಸವಾಗಿದ್ದ; ವಾಲ್ಮೀಕಿಗೆ ರಾಮಾಯಣ ಬರೆಯಲು ಸ್ಫೂರ್ತಿ ದೊರಕಿದ್ದು ಗೋದಾವರೀ ತೀರದಲ್ಲೇ. ಮಹಾಭಾರತದಲ್ಲಿ ಇದನ್ನು ಸಪ್ತಗೋದಾವರಿ ಎಂದು ಉಲ್ಲೇಖಿಸಲಾಗಿದೆ. ಇದರ ದಂಡೆಯ ಮೇಲೆ ದಶಾಶ್ವಮೇಧಿಕ, ಗೋವರ್ಧನ, ಸಾವಿತ್ರೀ, ವಿದರ್ಭ, ಮಾರ್ಕಂಡೇಯ, ಕಿಷ್ಕಿಂಧೆ ಮುಂತಾದ ತೀರ್ಥಗಳಿದ್ದುವೆಂದು ತಿಳಿದುಬರುತ್ತದೆ. ಬ್ರಹ್ಮಪುರಾಣದಲ್ಲಿ ಗೋದಾವರಿಯ 100 ತೀರ್ಥಗಳ ಉಲ್ಲೇಖವಿದೆಯೆನ್ನಲಾಗಿದೆ. ಅವುಗಳಲ್ಲಿ ತ್ರ್ಯಂಬಕ, ಕುಶಾವರ್ತ, ಜನಸ್ಥಾನ, ಗೋವರ್ಧನ, ಪ್ರವರಾಸಂಗಮ ಮತ್ತು ನಿವಾಸಪುರ ಇವು ವಿಶೇಷ ಪುಣ್ಯಪ್ರದಗಳೆಂದು ಪರಿಗಣಿತವಾಗಿವೆ. 

	ಗೋದಾವರಿಯ ಪ್ರವಾಹಗಳಾದ ವಶಿಷ್ಟ, ವೈನತೇಯ ಮತ್ತು ಗೌತಮಿ ಇವುಗಳಿಂದ ನಿರ್ಮಿತವಾದ ಅಮಲಾಪುರ ದ್ವೀಪದಲ್ಲಿ ಭಾನುವಾರ ಸ್ನಾನ ಮಾಡುವುದು ಪುಣ್ಯಪ್ರದವೆಂದು ನಂಬಿಕೆ. ಇದಕ್ಕಾಗಿ ಯಾತ್ರಿಕರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಅಲ್ಲಿಯ ಶಿವದೇವಾಲಯದ ಲಿಂಗವನ್ನು ನರ್ಮದಾ ನದಿಯಿಂದ ಗರುಡ ತಂದನೆಂಬುದು ಪುರಾಣಪ್ರೋಕ್ತವಾದ ವಿಚಾರ. 

	ಗೋದಾವರೀ ನದೀತೀರದಲ್ಲಿ ಅನೇಕ ತೀರ್ಥಕ್ಷೇತ್ರಗಳಿವೆ. ಧವಳೇಶ್ವರಂ ಒಂದು ಪ್ರಸಿದ್ಧ ಕ್ಷೇತ್ರ. ಮಾಘಮಾಸದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಹತ್ತಿರದಲ್ಲೇ ಒಂದು ಬೆಟ್ಟವಿದೆ. ಅಲ್ಲಿ ನಾರದಮುನಿಗಳು ವಾಸವಾಗಿದ್ದರೆಂದು ಪ್ರತೀತಿ. ಕಲ್ಲಿನ ಮೇಲೆ ಶ್ರೀರಾಮ ಸೀತೆಯರ ಪಾವಲಿಯಾಕಾರದ ಒಂದು ಮುದ್ರೆಯುಂಟು. ರಾಜಮಹೇಂದ್ರಿಯಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಪುಷ್ಕರ ಎಂಬ ಸ್ನಾನ ಮಹೋತ್ಸವ ನಡೆಯುತ್ತದೆ. 

	ಶ್ರೀರಾಮ ಭದ್ರಾಚಲದಲ್ಲಿ ಬಂದು ವಾಸವಾಗಿದ್ದದ್ದರಿಂದ ಆ ಸ್ಥಾನ ಪವಿತ್ರವೆಂದು ಪರಿಗಣಿತವಾಗಿದೆ. ಅಲ್ಲಿಂದ 52 ಕಿ.ಮೀ. ದೂರದಲ್ಲಿ ಶ್ರೀರಾಮನ ಪರ್ಣಕುಟಿ ಇತ್ತೆಂದೂ ಅಲ್ಲಿಂದಲೇ ರಾವಣ ಸೀತೆಯನ್ನು ಅಪಹರಣ ಮಾಡಿದನೆಂದೂ ಪ್ರತೀತಿಯುಂಟು. 

	ನಾಸಿಕ ಮತ್ತು ಪೈಠಣ ಮತ್ತೆರಡು ಪವಿತ್ರ ಕ್ಷೇತ್ರಗಳು. ಗೋದಾವರೀ ನದಿಗೆ ದಕ್ಷಿಣ ಗಂಗಾ ಎಂದು ಹೆಸರು ಬಂದಿರುವಂತೆ, ಅದರ ತೀರದಲ್ಲಿರುವ ಪವಿತ್ರ ಕ್ಷೇತ್ರಗಳು ದಕ್ಷಿಣ ಕಾಶಿಗಳೆಂದು ಹೆಸರಾಗಿವೆ. ಪವಿತ್ರ ಗೋದಾವರೀ ಸ್ಮರಣೆ ಮಾತ್ರದಿಂದಲೇ ಮನುಷ್ಯನ ಸರ್ವ ಪಾಪಗಳೂ ನಾಶವಾಗುತ್ತವೆಂಬುದು ಹಿಂದೂಗಳ ನಂಬಿಕೆ. ರಾಮ ಈ ತೀರದಲ್ಲೇ ಪಿತೃಶ್ರಾದ್ಧ ಮಾಡಿದನಂತೆ. ಬ್ರಹ್ಮಾಂಡ ಪುರಾಣ ಮತ್ತು ಸ್ಕಾಂದ ಪುರಾಣಗಳಲ್ಲಿ ಗೋದಾವರೀ ಮಹಿಮೆಯನ್ನು ವಿಶೇಷವಾಗಿ ವರ್ಣಿಸಲಾಗಿದೆ. 

	ಗೋದಾವರಿಯ ನೀರು ಆರೋಗ್ಯದಾಯಕವೆಂದು ಹಲವರ ನಂಬಿಕೆ. ಪಿತ್ತ ಮತ್ತು ರಕ್ತದ ವ್ಯಾಧಿಗಳು, ಕುಷ್ಠರೋಗ ಇವು ಗೋದಾವರೀ ನೀರಿನಿಂದ ವಾಸಿಯಾಗುತ್ತವೆನ್ನಲಾಗಿದೆ. ಇದು ಪಥ್ಯಕರವಾದ್ದರಿಂದ ಹಸಿವು ಹೆಚ್ಚಿಸುತ್ತದೆಂದು ರಾಜನಿಘಂಟಿನಲ್ಲಿ ಹೇಳಿದೆ.	

	ನೀರಾವರಿ ಮತ್ತು ವಿದ್ಯುತ್ ವ್ಯವಸ್ಥೆ : ಗೋದಾವರಿ ನದೀ ಪ್ರದೇಶದಲ್ಲಿ ಪ್ರಕೃತದಲ್ಲಿ ನೀರಾವರಿ ಒದಗಿಸುತ್ತಿರುವ ಯೋಜನೆಗಳು ಇವು : 
	(ಚಿ) ಮಹಾರಾಷ್ಟ್ರದಲ್ಲಿ 
		1 ಗೋದಾವರಿ ನಾಲೆಗಳು 
		2 ಗಂಗಾಪುರ ಯೋಜನೆ
		3 ಪ್ರವಣ ನಾಲೆಗಳು 
	(b) ಮಧ್ಯಪ್ರದೇಶದಲ್ಲಿ 
		1 ವೈನಗಂಗಾ ನಾಲೆಗಳು 
	(ಛಿ) ಆಂಧ್ರಪ್ರದೇಶದಲ್ಲಿ 
		1 ಗೋದಾವರಿ ಮುಖಜಭೂಮಿ ವ್ಯವಸ್ಥೆ
		2 ನಿಜಾಂ ಸಾಗರ ಯೋಜನೆ 
		3 ಮನಾಯಿರ್ ಯೋಜನೆ
		4 ಗೋದಾವರಿ ಉತ್ತರ ನಾಲೆ ಯೋಜನೆ 	
ಈಚೆಗೆ ಕೈಗೊಳ್ಳಲಾಗಿರುವ ಯೋಜನೆಗಳು ಇವು 
	(ಚಿ) ಮಹಾರಾಷ್ಟ್ರದಲ್ಲಿ
		1 ಮುಳಾ ಯೋಜನೆ
		2 ಗೋದಾವರಿ ಮೇಲ್ದಂಡೆ ಯೋಜನೆ 
		3 ಪೂರ್ಣಾ ಯೋಜನೆ (ವಿದ್ಯುತ್ತು ಮತ್ತು ನೀರಾವರಿ)
		4 ಜೈಕ್‍ವಾಡಿ ಒಂದನೆಯ ಹಂತ 
		5 ಇಟಿಯಾಧೊ ಯೋಜನೆ
	(b) ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳೆರಡಕ್ಕೂ ಸೇರಿದಂತೆ
		1 ಬಾಗ್ ಯೋಜನೆ
	(ಛಿ) ಆಂಧ್ರಪ್ರದೇಶದಲ್ಲಿ 
		1 ಪೋಚಂಪಾಡ್ ಯೋಜನೆ 
		2 ಧವಳೇಶ್ವರದ ಆಣೆಕಟ್ಟು
ಗೋದಾವರಿ ವ್ಯವಸ್ಥೆಯಲ್ಲಿಯ ವಿದ್ಯುದುತ್ಪಾದನೆಯ ಯೋಜನೆಗಳು ಇವು 
		1 ಮಚಕುಂಡ್ ಯೋಜನೆ. ಇದರ ವಿದ್ಯುತ್ತು ಆಂಧ್ರ ಪ್ರದೇಶ 
		 ಮತ್ತು ಒರಿಸ್ಸಗಳ ನಡುವೆ ಹಂಚಿಕೆಯಾಗುತ್ತಿದೆ. 
		2 ಆಂಧ್ರ ಪ್ರದೇಶದ ಸಿಲೇರು ಮೇಲ್ದಂಡೆ ಯೋಜನೆ 
		3 ಬಲಿಮೇಲ ಯೋಜನೆ (ನಿರ್ಮಾಣದಲ್ಲಿದೆ. ಇಲ್ಲಿ ಉತ್ಪಾದನೆಯಾಗುವ 				ವಿದ್ಯುತ್ತನ್ನು ಆಂಧ್ರ ಪ್ರದೇಶ ಮತ್ತು ಒರಿಸ್ಸಗಳು ಹಂಚಿಕೊಳ್ಳುತ್ತವೆ.)
		4 ಕೆಳ ಸಿಲೇರೂ ಯೋಜನೆ

ಪೋಚಂಪಾಡ್ ಯೋಜನೆ : ನಿಜಾಮಾಬಾದ್, ಕರೀಂನಗರ, ವಾರಂಗಲ್, ನಲಗೊಂದ ಮತ್ತು ಅದಿಲಾಬಾದ್ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯಗಳನ್ನೊದಗಿಸಲು ಹಿಂದಿನ ಹೈದರಾಬಾದ್ ಸಂಸ್ಥಾನ ಗೋದಾವರಿ ಉತ್ತರ ಕಾಲುವೆ ಯೋಜನೆಯನ್ನು 1947ರಲ್ಲಿ ಕೈಗೊಂಡಿತು. 1963ರಲ್ಲಿ ಇದು ವಿಸ್ತøತವಾಯಿತು. ಮೊದಲು ಗೋದಾವರಿ ಮೊದಲನೆಯ ಹಂತದ ಯೋಜನೆ ಎನಿಸಿಕೊಂಡಿದ್ದ ಇದು ಈಗ ಪೋಚಾಂಪಾಡ್ ಯೋಜನೆ ಎನಿಸಿಕೊಂಡಿದೆ. ಈ ಯೋಜನೆಯ ಅಂಗವಾಗಿ ನಿರ್ಮಾಣವಾಗುತ್ತಿರುವ ಕಟ್ಟೆಯ ಎತ್ತರ ಸು. 140; ಉದ್ದ 47,900. ಕೋಡಿಯ ಉದ್ದ 2510. ಇದರಲ್ಲಿ ಹರಿಯುವ ನೀರು 16 ಲಕ್ಷ ಕ್ಯೂಸೆಕ್ಸ್. ದಕ್ಷಿಣ ಕಾಲುವೆಯಲ್ಲಿ ಹರಿಯುವ ನೀರು 8,600 ಕ್ಯೂಸೆಕ್ಸ್. ಈ ಯೋಜನೆಯಿಂದು 33.64 ಲಕ್ಷ ಎಕರೆಗಳಿಗೆ ನೀರಾವರಿ ಒದಗುತ್ತದೆ. 20 ಲಕ್ಷ ಎಕರೆಗಳಿಗಿಂತ ಹೆಚ್ಚು ಜಮೀನಿಗೆ ನೀರಾವರಿ ಒದಗಿಸುವನ ಏಕೈಕ ಯೋಜನೆ ಗೋದಾವರಿಯಲ್ಲಿ ಇದೊಂದೇ. ಈಗಿನ ಕಾಲುವೆಯಿಂದ 5.7 ಲಕ್ಷ ಎಕರೆಗಳಿಗೆ ನೀರಾವರಿ ಒದಗುತ್ತದೆ. ಇದರಿಂದ ವರ್ಷಕ್ಕೆ 10.96 ಲಕ್ಷ ಟನ್ ಅಧಿಕ ಧಾನ್ಯ ಉತ್ಪತ್ತಿಯಾಗುತ್ತದೆ. 1970ರಲ್ಲಿ ನೀರಾವರಿ ಆರಂಭವಾಯಿತು. 

	ಗೋದಾರವರಿ ಅಣೆಕಟ್ಟು : ಗೋದಾವರಿ ಜಿಲ್ಲೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನೊದಗಿಸುವ ಉದ್ದೇಶದಿಂದ ಬ್ರಿಟಿಷ್ ಆಡಳಿತದ ಕಾಲದಲ್ಲಿ ಕಟ್ಟಲಾದ ಅಣೆಕಟ್ಟು. ಈ ಪ್ರದೇಶದಲ್ಲಿ 1833ರಲ್ಲೂ ಮತ್ತೆ 1845ರಲ್ಲೂ ಘೋರ ಕ್ಷಾಮ ತಲೆದೋರಿ ಸರ್ಕಾರಕ್ಕೆ ನಷ್ಟವಾದ್ದರಿಂದ, ಕಾವೇರಿ ಮುಖಜಭೂಮಿಯಲ್ಲಿ ಸುಭಿಕ್ಷ ತಂದಿದ್ದ ಮೇಜರ್ ಕಾಟನನ ಸಲಹೆಯನ್ನು ಬ್ರಿಟಿಷ್ ಸರ್ಕಾರ ಕೇಳಿತು. ಆತ ಗೋದಾವರೀ ನದಿಗೆ ಅಡ್ಡಲಾಗಿ ಧವಳೇಶ್ವರ ಬಳಿ ಒಂದು ಅಣೆಕಟ್ಟನ್ನೂ ಗೋದಾವರೀ ನದಿಯ ಎರಡು ಮುಖ್ಯ ಕವಲುಗಳ ಆಚೀಚೆ ಬದಿಗಳಿಗೆ ಒಂದೊಂದು ಕಾಲುವೆಯನ್ನೂ ಸೂಚಿಸಿದ. ಕೂಡಲೆ ಆತನ ಮೇಲ್ವಿಚಾರಣೆಯಲ್ಲಿ ಕೆಲಸಗಳು ಪ್ರಾರಂಭವಾದುವು. 

	ಅಣೆಕಟ್ಟಿನ ಮೇಲೆ ಕೆಲವು ವರ್ಷಗಳ ಅನಂತರ ಮಳೆಗಾಲದಲ್ಲಿ ಹೆಚ್ಚು ನೀರನ್ನು ಕೂಡಿಸಲು 2 ಎತ್ತರದ ಬಾಗಿಲುಗಳನ್ನಿಟ್ಟರು. 1935ರಲ್ಲಿ 3 ಎತ್ತರದ ಬಾಗಿಲುಗಳು ಬಂದುವು. ಪ್ರವಾಹ ಬಂದಾಗ ಈ ಬಾಗಿಲುಗಳು ತಾವಾಗಿಯೇ ಬೀಳುತ್ತವೆ. ಆಮೇಲೆ ಅವನ್ನು ಎತ್ತಬೇಕು. 

	ಕವಲುಗಳ ಪೂರ್ವದ ಮುಖಜಭೂಮಿ ವಿಸ್ತೀರ್ಣ 19,450 ಚ.ಮೈ. ಮಧ್ಯದ ಮುಖಜಭೂಮಿಯ ವಿಸ್ತೀರ್ಣ 400 ಚ. ಮೈ. ಪಶ್ಚಿಮದ ಮುಖಜಭೂಮಿ ಕೋಲೇರ್ ಸರೋವರದ ವರೆಗೂ 1,000 ಚ. ಮೈ. ವಿಸ್ತಾರವಾಗಿ ಹರಡಿದೆ. ಮೊದಲನೆಯ ಎರಡು ಮುಖಜಭೂಮಿಗಳಲ್ಲಿ ನೀರಾವರಿ ಸಮಲ್ಕೋಟ ಮತ್ತು ಎಲ್ಲೂರು ಶಾಖೆಗಳಿಗೂ ಗೋದಾವರಿಯ ಶಾಖೆಗಳಿಗೂ ನಡುವೆ ಹರಡಿದೆ. ನಡುವಣ ನೆಲದಲ್ಲಿ 8 ತಿಂಗಳಲ್ಲಿ ಕಟ್ಟಿ ಮುಗಿಸಿದ ಗುನ್ನಾವರಂ ಮೇಲು ಗಾಲುವೆಯಿದೆ. ಈ ಪ್ರದೇಶವನ್ನು ಗೋದಾವರಿ ಜಿಲ್ಲೆಯ ತೋಟವೆನ್ನುತ್ತಾರೆ. ಈಚೆಗೆ ಪೊಲ್ಲಾವರಂ ದ್ವೀಪಕ್ಕೆ ನೀರಾವರಿಯನ್ನು ಒದಗಿಸಲು ಪೊಲ್ಲಾವರಂ ಮೇಲುಗಾಲುವೆಯನ್ನು ಕಟ್ಟಿದ್ದಾರೆ. ಪ್ರವಾಹಗಳಿಂದ ರಕ್ಷಣೆಗಾಗಿ ಶಾಖೆಗಳ ದಡಗಳಲ್ಲಿ ಎಲ್ಲ ಕಡೆಗಳಲ್ಲೂ ಏರಿಗಳನ್ನು ಕಟ್ಟಿದ್ದಾರೆ. 

	ಅಗಲವಾದ ನದಿಯಲ್ಲಿಯ ದ್ವೀಪಗಳನ್ನು ಒಟ್ಟುಗೂಡಿಸುವ ಅಣೆಕಟ್ಟು ನಾಲ್ಕು ವಿಭಾಗಗಳಲ್ಲಿವೆ. ಅದರ ವಿವರಗಳು ಈ ರೀತಿ ಇವೆ : 
ವಿವರ
ಧವಳೇಶ್ವರ 
ವಿಭಾಗ
ರ್ಯಾಲೀ 
ವಿಭಾಗ
ಮದ್ದೂರು 
ವಿಭಾಗ 
ವ್ಯಾಸೇಶ್ವರ
ವಿಭಾಗ

1 ಅಣೆಕಟ್ಟಿನ ಉದ್ದ
4,839
2,859
1,545
2,501

2 ಕವಾಟಗಳ ಸಂಖ್ಯೆ
445
271
141
246

3 ಕವಾಟದ ಅಳತೆ
10 ( 3
10 ( 3
10 ( 3
10 ( 3

4 ಅಡಿ ಬಚ್ಚಲುಗಳು
10(20 ಘಿ 20)

ಇಲ್ಲ

5 ಪ್ರವಾಹ (ಕ್ಯೂಸೆಕ್ಸ್)
20,800
7,400
-
12,200

6 ತೂಬಿನ ಬಾಗಿಲು
15

-

7 ಮಟ್ಟ ಬದಲಾವಣೆ
ಕಟ್ಟೆಗಳು
150 ( 21
2
105 ( 15
2
-
150 ( 20
2

ನೀರಾವರಿಯ ವಿವರಗಳು (1960-61) (ಸಾವಿರ ಎಕರೆಗಳಲ್ಲಿ)

ಪೂರ್ವ ಗೋದಾವರಿ ಜಿಲ್ಲೆ
ಪಶ್ಚಿಮ ಗೋದಾವರಿ ಜಿಲ್ಲೆ

ವಿವರ
ಪೂರ್ವದ ಮುಖಜಭೂಮಿ
ಮಧ್ಯದಮುಖಜ ಭೂಮಿ
ಒಟ್ಟು
ಪಶ್ಚಿಮದ ಮುಖಜ ಭೂಮಿ
ಒಟ್ಟು

1 ನಾಲೆಯ ಕೆಳಗಿನ ಒಟ್ಟು ಭೂಮಿ 
430.4
303.4
733.8
668.8
1,402.6

2 ವ್ಯವಸಾಯ ಯೋಗ್ಯ ಭೂಮಿ
352.7
241.9
594.6
565.0
1,159.6

3 ಆಯಕಟ್ಟು
...
...
...
...
933

ನಾಲೆಗಳು: 1. ಗೊದಾವರಿಯ ಪೂರ್ವದ ನೆಲದ ಪ್ರಧಾನ ನಾಲೆಯ ಉದ್ದ ಎಡದಡದಲ್ಲಿ 7 ಕಿ.ಮೀ. ಶಾಖಾನಾಲೆಗಳ ಉದ್ದ 250 ಕಿ.ಮೀ. ಇದರಲ್ಲಿ ನೀರು ಎಲ್ಲ ಕಾಲಗಳಲ್ಲೂ ಹರಿಯುತ್ತದೆ. ನಾಲೆ ಗರಿಷ್ಠವಾಗಿ 48.75 ಕ್ಯೂಸೆಕ್ಸುಗಳನ್ನು ಸಾಗಿಸುತ್ತದೆ.
2. ಮಧ್ಯದ ಮುಖಜ ಭೂಮಿಯ ಪ್ರಧಾನ ನಾಲೆಯ ಉದ್ದ 13 ಕಿ.ಮೀ.; ಶಾಖಾನೆಗಳ ಉದ್ದ 188 ಕಿ.ಮೀ. ಇಳಿಯುವ ಮಟ್ಟ ರೇಖೆಯ ಮೇಲೆ (ಫಾಲಿಂಗ್ ಕಾಂಟೂರ್) ಎಲ್ಲ ನಾಲೆಗಳು ಹೋಗುತ್ತದೆ. ಗರಿಷ್ಠವಾಗಿ ಇದು 3,400 ಕ್ಯೂಸೆಕ್ಸುಗಳನ್ನು ಸಾಗಿಸುತ್ತದೆ.
3. ಪಶ್ಚಿಮದ ಮುಖಜಭೂಮಿಯಲ್ಲಿ ನದಿಯ ಬಲದಡದಲ್ಲಿ ಹೋಗುವ ಪ್ರಧಾನ ನಾಲೆ 7 ಕಿ.ಮೀ. ಉದ್ದ ಶಾಖಾನಾಲೆಗಳ ಉದ್ದ 333 ಕಿ.ಮೀ. ಗರಿಷ್ಠವಾಗಿ ಇದು 7,500 ಕ್ಯೂಸೆಕ್ಸುಗಳನ್ನು ಸಾಗಿಸುತ್ತದೆ. 
	ಈ ಮೂರು ಪ್ರಧಾನ ನಾಲೆಗಳಲ್ಲೂ ಗರಿಷ್ಟವಾಗಿ ಒಟ್ಟು 15,855 ಕ್ಯೂಸೆಕ್ಸುಗಳಷ್ಟು ನೀರು ಹರಿಯುತ್ತದೆ.
	ಗೋದಾವರಿ ಅಣೆಕಟ್ಟಿನ ಯೋಜನೆ 1877 ರಿಂದ ನೀರಾವರಿ ಒದಗಿಸುತ್ತದೆ. ಆಗಾಗ ಬಡಾವಣೆಗಳೂ ಬದಲಾವಣೆಗಳೂ ಆಗಿವೆ. 

	ಈ ಮೂರು ಮುಖಜಭೂಮಿ ಪ್ರದೇಶಗಳ ನಾಲೆಗಳಲ್ಲಿ ವರ್ಷದಲ್ಲಿ 11 ತಿಂಗಳುಗಳ ಕಾಲ ಜಲಯಾನ ನಡೆಯುತ್ತದೆ. ಇವುಗಳ ಮೂಲಕ ಸಾಗುವ ದೋಣಿಗಳು ವರ್ಷಕ್ಕೆ 6 ಕೋಟಿ ರೂಪಾಯಿಗಳ ನಾಟವನ್ನೂ 50 ಕೋಟಿ ರೂಪಾಯಿಗಳ ಧಾನ್ಯವನ್ನೂ 10 ಲಕ್ಷ ಜನರನ್ನೂ ಸಾಗಿಸುತ್ತದೆ.

	ಗೋದಾವರಿಯ ಮಧ್ಯದ ಮುಖಜಭೂಮಿಯಿಂದ ಈಚೆಗೆ ಅನ್ನಂಪಲ್ಲಿ ಮಟ್ಟ ಬದಲಾವಣೆಯ ಕಟ್ಟೆಯ (ಲಾಕ್) ಕೆಳಗೆ ಪೊಲ್ಲಾವರಂ ನಾಲೆ ಒಂದು ಮೇಲುಗಾಲುವೆಯ ಮೂಲಕ ವೃದ್ಧಗೌತಮಿತಿಯನ್ನು ದಾಟಿ ಗೌತಮಿ ಗೋದಾವರಿಯ ಎರಡು ಶಾಖೆಗಳ ನಡುವೆ ಇರುವ ಪೊಲ್ಲಾವರಂ ದ್ವೀಪಕ್ಕೆ ನೀರಾವರಿಯನ್ನು ಒದಗಿಸುತ್ತದೆ. ಈ ನಾಲೆಯ ಕೆಳಗೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ 17,500 ಎಕರೆಗಳಿಗೆ ನೀರು ದೊರೆಯುತ್ತದೆ.					(ಎಚ್.ಸಿ.ಕೆ.)

ಧವಳೇಶ್ವರದ ಈಗಿನ ಅಣೆಕಟ್ಟು ತುಂಬ ಅಪಾಯ ಸ್ಥಿತಿಯಲ್ಲಿದೆ. ಇದು ಯಾವಾಗಲಾದರೂ ಒಡೆಯಬಹುದು. ಆದ್ದರಿಂದ ಈ ಅಣೆಕಟ್ಟಿನ ಆದಿಯ ಆಯಕಟ್ಟನ್ನು ಸ್ತಿಮಿತಗೊಳಿಸುವ ಉದ್ದೇಶದಿಂದ ಹೊಸ ಅಣೆಕಟ್ಟನ್ನು ಕಟ್ಟಲಾಗುತ್ತದೆ. ಗೌತಮಿ ಶಾಖೆಯ ಧವಳೇಶ್ವರ ವಿಭಾಗದಲ್ಲಿ ಕಟ್ಟೆಯ ಉದ್ದ 4,817', ರ್ಯಾಲೀ ವಿಭಾಗದಲ್ಲಿ 2,807' ಮದ್ದೂರು ವಿಭಾಗದಲ್ಲಿ 1,467' ಮತ್ತು ವ್ಯಾಸೇಶ್ವರ ವಿಭಾಗದಲ್ಲಿ 2,539. ಈ ಯೋಜನೆಗೆ ತಗಲುವ ವೆಚ್ಚ ರೂ. 22.52 ಕೋಟಿ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ